ಬೆಂಗಳೂರು: ನವಜಾತ ಶಿಶುಗಳ ಆರೋಗ್ಯದಲ್ಲಿ ಆಧುನಿಕ ಚಿಕಿತ್ಸಾ ವಿಧಾನಗಳು ಹಾಗೂ ಸಂಶೋಧನೆಯ ಮಹತ್ವವನ್ನು ಒತ್ತಿಹೇಳುವ ಉದ್ದೇಶದಿಂದ ಮೆಡಿಕವರ್ ಮಹಿಳಾ & ಮಕ್ಕಳ ಆಸ್ಪತ್ರೆ, ವೈಟ್ಫೀಲ್ಡ್, ಬೆಂಗಳೂರುನಲ್ಲಿ ‘ಥೆರಪ್ಯೂಟಿಕ್ ಹೈಪೋಥರ್ಮಿಯಾ ವರ್ಕ್ಶಾಪ್’ ಗೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ದೇಶ ಮತ್ತು ವಿದೇಶದ ನಾನಾ ಭಾಗದಿಂದ ಒಟ್ಟು 950 ಕ್ಕೂ ಹೆಚ್ಚು ವೈದ್ಯರು ಭಾಗಿಯಾಗುತ್ತಿದ್ದಾರೆ. ಈ ಕಾರ್ಯಕ್ರಮ ಒಟ್ಟು ಮೂರು ದಿನ ನಡೆಯುತ್ತಿದ್ದು, ಇದರಲ್ಲಿ ಒಟ್ಟು ೧೨ ಕಾನ್ಫರೆನ್ಸ್ ಗಳು ನಡೆಯಲಿದೆ.
ಜನನದ ವೇಳೆ ಆಮ್ಲಜನಕದ ಕೊರತೆಯಿಂದ ಉಂಟಾಗುವ Hypoxic-Ischemic Encephalopathy (HIE) ನವಜಾತ ಶಿಶುಗಳ ಮೆದುಳಿಗೆ ಗಂಭೀರ ಹಾನಿಯನ್ನು ಉಂಟುಮಾಡಬಹುದು. ಇಂತಹ ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ನೀಡುವ ‘ಕೂಲಿಂಗ್’ ಅಥವಾ ಥೆರಪ್ಯೂಟಿಕ್ ಹೈಪೋಥರ್ಮಿಯಾ ಚಿಕಿತ್ಸೆಯು ಮೆದುಳಿನ ಹಾನಿ ಹಾಗೂ ದೀರ್ಘಕಾಲೀನ ಅಂಗವೈಕಲ್ಯದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಿಕಿತ್ಸೆಯನ್ನು ಸಾಮಾನ್ಯವಾಗಿ ಜನನದ ಮೊದಲ 6 ಗಂಟೆಗಳೊಳಗೆ ಪ್ರಾರಂಭಿಸುವುದು ಅತ್ಯಂತ ಮಹತ್ವದ್ದಾಗಿದೆ.
ಕಾರ್ಯಾಗಾರದಲ್ಲಿ HIE ಅನ್ನು ತ್ವರಿತವಾಗಿ ಗುರುತಿಸುವುದು, ಸೂಕ್ತ ಶಿಶುಗಳನ್ನು ಆಯ್ಕೆ ಮಾಡುವುದು, ಸುರಕ್ಷಿತವಾಗಿ ಕೂಲಿಂಗ್ ಚಿಕಿತ್ಸೆ ನೀಡುವುದು, ನಿರಂತರ ಮೇಲ್ವಿಚಾರಣೆ ಹಾಗೂ ನಂತರದ ಫಾಲೋ-ಅಪ್ ಕುರಿತು ವೈದ್ಯರು ಮತ್ತು ನರ್ಸ್ಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ.
ಈ ಕಾರ್ಯಾಗಾರವನ್ನ ಡಾ. ಆರ್ ಕಿಶೋರ್ ಕುಮಾರ್, ಡಾ. ಲಥೀಶ್ ಕಾಂಬಂ ಹಾಗೂ ಡಾ. ಶಿವಶಂಕರ್ ದಿಗ್ಗಿಕರ್ ಮತ್ತು ಡಾ ಪ್ರವೀಣ್ ಸೇರಿ ಹಲವು ವೈದ್ಯರು ದೀಪ ಬೆಳಗಿಸೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನವಜಾತ ಶಿಶುಗಳ ಚಿಕಿತ್ಸೆಯಲ್ಲಿ ಸಂಶೋಧನೆಯ ಮಹತ್ವಕ್ಕೂ ಕಾರ್ಯಾಗಾರದಲ್ಲಿ ವಿಶೇಷ ಒತ್ತು ನೀಡಲಾಗುತ್ತಿದೆ. ಭಾರತೀಯ ಶಿಶುಗಳ ಅಗತ್ಯಗಳಿಗೆ ಅನುಗುಣವಾಗಿ ಸ್ಥಳೀಯ ಸಂಶೋಧನೆಗಳನ್ನು ಉತ್ತೇಜಿಸುವುದು ಹಾಗೂ ವೈಜ್ಞಾನಿಕವಾಗಿ ಸಾಬೀತಾದ ಉತ್ತಮ ಚಿಕಿತ್ಸಾ ಪದ್ಧತಿಗಳನ್ನು ಪ್ರತಿಯೊಂದು ನವಜಾತ ಶಿಶುಗಳ ಘಟಕಕ್ಕೂ ತಲುಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
South Neocon ಸಮ್ಮೇಳನದ ಭಾಗವಾಗಿ ನಡೆಯುತ್ತಿರುವ ಈ ಕಾರ್ಯಕ್ರಮವು ದಕ್ಷಿಣ ಭಾರತದ ನವಜಾತ ಶಿಶು ತಜ್ಞರು, ಮಕ್ಕಳ ತಜ್ಞರು ಮತ್ತು ನರ್ಸ್ಗಳಿಗೆ ಜ್ಞಾನ, ಅನುಭವ ಹಾಗೂ ಪ್ರಾಯೋಗಿಕ ಚಿಕಿತ್ಸಾ ವಿಧಾನಗಳನ್ನು ಹಂಚಿಕೊಳ್ಳಲು ಪ್ರಮುಖ ವೇದಿಕೆಯಾಗಲಿದೆ.





Leave a Reply